ಬೀದರ ಜಿಲ್ಲೆ ಭಾಲ್ಕಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬೆಳಂ ಬೆಳಿಗ್ಗೆ ಜಿಪಂ ಸಿಇಒ ಗಿತ್ತೆ ಮಾಧವ್ ವಿಠ್ಠಲರಾವ್ ಭೇಟಿ.

ವಿವಿಧ ಯೋಜನೆಗಳ ಕಾರ್ಯವೈಖರಿ ಪರಿಶೀಲನೆ

ಭಾಲ್ಕಿ : ಗ್ರಾಮಗಳಲ್ಲಿರುವ ಜನರ ಸಮಸ್ಯೆಗಳನ್ನು ತಳಮಟ್ಟದಿಂದ ಅವಲೋಕಿಸಿ ಅವುಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಬೀದರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗಿತ್ತೆ ಮಾಧವ್ ವಿಠ್ಠಲರಾವ್ ಅವರು ಬುಧವಾರ ಬೆಳಂ ಬೆಳಿಗ್ಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು.

ತಾಲ್ಲೂಕಿನ ತಳವಾಡ (ಕೆ) ಗ್ರಾಪಂ ವ್ಯಾಪ್ತಿಯ ಕರಡ್ಯಾಳ, ಧಾರಜವಾಡಿ, ಹಾಗೂ ಭಾತಂಬ್ರಾ ಗ್ರಾಪಂ/ಗ್ರಾಮಗಳಲ್ಲಿನ ವಿವಿಧ ಓಣಿಗಳಲ್ಲಿ ಸುತ್ತಾಡಿದ ಅವರು, ಜಲ ಜೀವನ್ ಅಭಿಯಾನ-ಮನೆ-ಮನೆಗೆ ಗಂಗೆ ಕಾರ್ಯಕ್ರಮದಡಿ ಗ್ರಾಮದ ಪ್ರತಿಯೊಂದು ಮನೆಗೆ ಅಳವಡಿಸಿದ ನೀರಿನ ನಳದ ತೊಟ್ಟಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖುದ್ದಾಗಿ ಪರಿಶೀಲಿಸಿ ಈ ಕುರಿತು ಜನರಿಂದ ಅಭಿಪ್ರಾಯ ಕೇಳಿದರು. ಈ ವೇಳೆ ನೀರು ಪೂರೈಕೆ ವಿಷಯವಾಗಿ ಕಂಡುಬಂದ ಸಮಸ್ಯೆಗಳಿಗೆ ತಕ್ಷಣವೇ ಪರಿಹರಿಸಬೇಕು ಎಂದು ಸ್ಥಳದಲ್ಲಿದ್ದ ಪಿಡಿಒ ಹಾಗೂ ಜೆಜೆಎಂ ಅಧಿಕಾರಿಗೆ ಸೂಚಿಸಿದರು.

ಜನರ ಬಯಲು ಶೌಚಾಲಯ ತಪ್ಪಿಸಲು ಸ್ವಚ್ಛ ಭಾರತ ಅಭಿಯಾನದಡಿ ಕರಡ್ಯಾಳ ಗ್ರಾಮದಲ್ಲಿ ವೈಯಕ್ತಿಕ ಹಾಗೂ ಸಮುದಾಯ ಶೌಚಾಲಯ ನಿರ್ಮಿಸಬೇಕು. ವಿಬಿಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಬಡ ಕೂಲಿಕಾರರಿಂದ ಕೂಲಿ ಬೇಡಿಕೆ ಜಾಸ್ತಿ ಇದ್ದು ಅವರಿಗೆ ಕೂಲಿ ಕೆಲಸ ನೀಡಬೇಕು ಎಂದರು.

ಕೋನಮೇಳಕುಂದಾ ಗ್ರಾಮದ ಹೊರ ವಲಯದಲ್ಲಿರುವ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿದ ಸಿಇಒ ಅವರು, ಮಕ್ಕಳ ಊಟ-ಪಾಠ, ಆರೋಗ್ಯ ವಿಚಾರಿಸಿದರು. ವಿದ್ಯಾರ್ಥಿಗಳು ಮಲಗುವ ಕೋಣೆ, ಹಾಸಿಗೆ ಹಾಗೂ ವಸತಿ ನಿಲಯ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಆಗಾಗ ಬಾಲಕ ಹಾಗೂ ಬಾಲಕಿಯರ ಆರೋಗ್ಯ ತಪಾಸಣೆ ನಡೆಸಬೇಕು. ಪ್ರೌಢಾವಸ್ಥೆಯಲ್ಲಿ ಮಕ್ಕಳಿಗೆ ಆರೋಗ್ಯ ಇಲಾಖೆಯು ನೀಡುವ ಲಸಿಕೆಗಳನ್ನು ಕಡ್ಡಾಯವಾಗಿ ಕೊಡಿಸಬೇಕು ಎಂದು ನಿಲಯದ ಸಿಬ್ಬಂದಿಗೆ ನಿರ್ದೇಶಿಸಿದರು. ನಂತರ ಸಿಇಒ ಅವರು ವಿದ್ಯಾರ್ಥಿಗಳೊಂದಿಗೆ ಸಾಲಿನಲ್ಲಿ ಕುಳಿತು ಬೆಳಿಗ್ಗೆಯ ಉಪಹಾರ ಸವಿದರು. ಸಸಿ ನೆಟ್ಟರು.

ಅಹಮದಾಬಾದ್ ಗ್ರಾಮದಲ್ಲಿ ನಡೆಯುತ್ತಿದ್ದ ಕಾಮಗಾರಿಯನ್ನು ಪರಿಶೀಲಿಸಿದ ಅವರು ಸ್ವತಃ ತಾವೇ ಮಣ್ಣು ಅಗೆದು ಬುಟ್ಟಿ ತುಂಬಿದರು. ಕೆಲಸ ನಿರತ ಕೂಲಿಕಾರರೊಂದಿಗೆ ಚರ್ಚಿಸಿದರು. ಕರಡ್ಯಾಳ ಹಾಗೂ ಭಾತಂಬ್ರಾ ಗ್ರಾಮದ ಅಂಗನವಾಡಿ ಕೆಂದ್ರಗಳಿಗೆ ಭೇಟಿ ನೀಡಿ ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರವನ್ನು ಪರೀಕ್ಷಿಸಿದರು. ಮಕ್ಕಳಿಗೆ ಮುದ್ಧಾಡಿ ಗೃಹಪಾಠ ಹೆಳಿಕೊಟ್ಟರು.

ಭಾತಂಬ್ರಾ ಗ್ರಾಮದ ಮನೆ-ಮನೆಗಳಿಗೆ ನೀರು ಪೂರೈಸುವ ಜೆಜೆಎಂ ಯೋಜನೆಯಡಿ ನಿರ್ಮಿಸಿದ ಬೃಹತ್ ಪ್ರಮಾಣ ನೀರು ಸಂಗ್ರಹ-ಸರಬರಾಜು ಟಾಕಿಯ ಗುಣಮಟ್ಟವನ್ನು ಅವಲೋಕಿಸಿದ ಸಿಇಒ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಲವು ಸಲಹೆ ನೀಡಿದರು. ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ ವಿತರಿಸಿ ಆಸ್ಪತ್ರೆಯಲ್ಲಿನ ರೋಗಿಗಳ ಕ್ಷೇಮ ವಿಚಾರಿಸಿದರು. ಆಸ್ಪತ್ರೆಯಲ್ಲಿನ ಔಷಧಿ ದಾಸ್ತಾನು ಕೋಣೆಗೆ ಪ್ರವೇಶಿಸಿ ಔಷಧಿಗಳ ಮುಕ್ತಾಯ ದಿನಾಂಕವನ್ನು ಪರಿಶೀಲಿಸಿದರು.

ತಾಪಂ ಇಒ ಬೀರೆಂದ್ರಸಿಂಗ್ ಠಾಕೂರ್, ಸಿಡಿಪಿಒ ಅಧಿಕಾರಿ, ನೀರು ಸರಬರಾಜು ಇಲಾಖೆಯ ಅಧಿಕಾರಿ, ಸಹಾಯಕ ನಿರ್ದೇಶಕ ಬಾಲಾಜಿ ಕೊಟೆ, ಜೆಜೆಎಂ, ವಿಬಿಜಿ ರಾಮ ಜಿ ಯೋಜನೆಯ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಯಾ ಗ್ರಾಪಂ ಸಿಬ್ಬಂದಿ ಈ ವೇಳೆ ಹಾಜರಿದ್ದರು.

About the Author

Leave a Reply

Your email address will not be published. Required fields are marked *

You may also like these

No Related Post