ಬೀದರ್: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಮಂಗಳವಾರ ಬೆಳಿಗ್ಗೆ 6:30 ಗಂಟೆಯಿಂದಲೇ ಬೀದರ್ ತಾಲೂಕಿನ ಕಮಠಾಣ, ಬಗ್ದಲ್ ಹಾಗೂ ಚಟ್ನಳ್ಳಿ ಗ್ರಾಮಗಳಿಗೆ ದಿಢೀರ್ ಭೇಟಿ ನೀಡಿ, ಹಲವು ಕಡೆ ಪರಿಶೀಲನೆ ನಡೆಸಿದರು.
ಸಿಇಒ ಅವರು ಮೊದಲು ಕಮಠಾಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಆಸ್ಪತ್ರೆಯ ಪ್ರತಿಯೊಂದು ಮೂಲೆಗೂ ಹೋಗಿ ಸ್ವಚ್ಛತೆ ಸೇರಿ ಹಲವು ತಪಾಸಣೆ ನಡೆಸಿದರು. ಪ್ರಮುಖವಾಗಿ ರೋಗಿಗಳಿಗೆ ಕೊಡುವ ಮಾತ್ರೆಗಳು ಹಾಗೂ ಔಷಧಗಳ ದಾಸ್ತಾನು ಸರಿಯಾಗಿದೆಯಾ ಎಂದು ಫಾರ್ಮಸಿಯಲ್ಲಿ ಚೆಕ್ ಮಾಡಿದರು. ಬಳಿಕ ಲ್ಯಾಬೋರೇಟರಿಗೆ ಭೇಟಿ ನೀಡಿ, ಅಲ್ಲಿಯ ತಪಾಸಣಾ ವ್ಯವಸ್ಥೆಯನ್ನು ವೀಕ್ಷಿಸಿದರು.
ಅಲ್ಲಿಂದ ನೇರವಾಗಿ ಕಮಠಾಣ ಗ್ರಾಮ ಪಂಚಾಯತಿ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದರು ನಂತರ ಸ್ಥಳದಲ್ಲಿದ್ದ ಗ್ರಾಮಸ್ಥರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಈ ವೇಳೆ ಊರಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜನರು ಅಳಲು ತೋಡಿಕೊಂಡರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಸಿಇಒ ರವರು “ಗ್ರಾಮದ ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲಾಗುವುದು, ಯಾರೂ ಆತಂಕ ಪಡುವ ಅಗತ್ಯವಿಲ್ಲ” ಎಂದು ಕಮಠಾಣ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
ಬಳಿಕ ಬಗ್ದಲ್ನಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ಶಾಲೆಯ ಅಡುಗೆ ಮನೆಗೆ ತೆರಳಿ ಅಲ್ಲಿ ಬಳಸುವ ತರಕಾರಿ ಹಾಗೂ ದಿನಸಿ ಪದಾರ್ಥಗಳ ಗುಣಮಟ್ಟವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ನಂತರ ವಿದ್ಯಾರ್ಥಿಗಳ ಸಾಲಿನಲ್ಲೇ ಕುಳಿತು, ಅವರೊಂದಿಗೆ ಮಧ್ಯಾಹ್ನದ ಊಟ ಸವಿದರು. ಊಟ ಹೇಗಿದೆ ಎಂದು ಮಕ್ಕಳ ಬಳಿಯೇ ಕೇಳಿ ತಿಳಿದುಕೊಂಡರು.
ಇದೇ ವೇಳೆ ಮಕ್ಕಳ ಜೊತೆ ಸಂವಾದ ನಡೆಸಿದ ಅವರು, “ಮುಂದಿನ SSLC ಪರೀಕ್ಷೆಯಲ್ಲಿ ಬಾಗ್ದಲ್ ಮುರಾರ್ಜಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಬೇಕು. ಪ್ರತಿಯೊಬ್ಬರೂ ಶಿಸ್ತನ್ನು ಅಳವಡಿಸಿಕೊಂಡು ಚೆನ್ನಾಗಿ ಓದಬೇಕು” ಎಂದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತದನಂತರ ಅಲ್ಲಿನ ಚೆಸ್ ಪಾರ್ಕ್ ಹಾಗೂ ಮ್ಯಾತ್ಸ್ ಪಾರ್ಕ್ ವೀಕ್ಷಿಸಿದರು.
ಕೊನೆಯದಾಗಿ ಚಾಟ್ನಳ್ಳಿ ಗ್ರಾಮದ ವಿಬಿ ಗ್ರಾಮ್ ಜಿ (VB G RAM G) ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಿಇಒ ರವರು, ಕೇವಲ ವೀಕ್ಷಣೆ ಮಾಡದೇ, ಸ್ಥಳದಲ್ಲಿದ್ದ ಕಾರ್ಮಿಕರ ಹಾಜರಾತಿಯನ್ನು (ಅಟೆಂಡೆನ್ಸ್) ತಾವೇ ಖುದ್ದಾಗಿ ಪಡೆದರು. ಅಷ್ಟೇ ಅಲ್ಲ, ತಾವು ಕೂಡ ಕೆಲಕಾಲ ಕೆಲಸಗಾರರೊಂದಿಗೆ ಕಾಯಕದಲ್ಲಿ ತೊಡಗಿಸಿಕೊಂಡು, ಶ್ರಮದಾನದ ಅನುಭವ ಪಡೆದುಕೊಂಡರು. ನಂತರ ಚಟ್ನಳ್ಳಿ ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜನ ಸಮಸ್ಯೆ ಆಲಿಸಿ ಪರಿಹಾರದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿ ಸಿಬ್ಬಂದಿ ಇದ್ದರು.
No Related Post